ನಾವೆಲ್ಲರೂ ಒಂದು ರೀತಿಯಲ್ಲಿ ಮಣ್ಣಿನ ಗೊಂಬೆಗಳು
… ಮಾನವನ ಶರೀರ ಪಂಚ ಮಹಾಬೂತ ಗಳಿಂದ ನಿರ್ಮಿತ ವಾದದ್ದು ಎಂಬುದಾಗಿ ನಮ್ಮ ಶಾಸ್ತ್ರ ಹೇಳುತ್ತದೆ. ಈ ಮಣ್ಣಿನಲ್ಲಿ ಹುಟ್ಟಿ, ಈ ಮಣ್ಣಿನಲ್ಲಿ ಹೊರಲಳಾಡಿ, ಈ ಮಣ್ಣಿನಲ್ಲೇ ಓಡಾಡಿ ಒಂದು ದಿನ ಈ ಮಣ್ಣಿನಲ್ಲೇ ಮಣ್ಣಾ ಗುವ ಮನುಷ್ಯ ಮಣ್ಣಿನ ಗೊಂಬೆಯಲ್ಲವೇ?
ಮಣ್ಣಿನಿಂದಲೇ ಜನನ, ಮಣ್ಣಿನಿಂದಲೇ ಮರಣ. ಮಾತ್ರವಲ್ಲ ಮನುಷ್ಯನ ಜೀವನಕ್ಕೆ ಆಧಾರ ವಾದ ಆಹಾರ ವಾದ ಉತ್ಪಾದನೆ ಮಣ್ಣಿಲ್ಲದೆ ಸಾಧ್ಯವೇ?
ಒಬ್ಬ ಬೆಳೆಗಾರ ಎದ್ದು ಒಂದು ಅಂಗಡಿಗೆ ಹೋದ ಅಂಗಡಿ ಮಾಲೀಕ ಆಗ ತಾನೇ ಬಾಗಿಲು ತೆಗೆದು ದೇವರಿಗೆ ಕೈಮುಗಿದು ಕೂತಿದ್ದ. ಅಂಗಡಿಗೆ ಬಂದ ಗ್ರಾಹಕನೊಬ್ಬ
ಒಂದು ರೂಪಾಯಿ ದುಡ್ಡು ಕೊಟ್ಟು ಅಂಗಡಿಯಲ್ಲಿರುವ ಎಲ್ಲಾ ಸಾಮಾನುಗಳನ್ನು ಕೊಡು ಎಂದ.ಆದರೆ ಅಂಗಡಿ ಮಾಲೀಕ ಆ ಅಂಗಡಿಯಲ್ಲಿದ್ದ ಯಾವ ವಸ್ತುವು ಒಂದು ರೂಪಾಯಿಗೆ ಸಿಗುವುದಿಲ್ಲ ಎಂದ.
ಅಂಗಡಿ ಮಾಲೀಕ ತುಂಬಾ ಹೊತ್ತು ಆಲೋ ಚಿಸಿ ಒಂದು ಮುಷ್ಠಿ ಮಣ್ಣನ್ನು ಗ್ರಾಹಕನಿಗೆ ಕೊಟ್ಟು ಹೇಳಿದ. ನೋಡು ನೀನು ಬಯಸಿದಂತೆ ಈ ಒಂದು ಹಿಡಿ ಮಣ್ಣಲ್ಲಿ ಎಲ್ಲವೂ ಇದೆ. ಯಾಕೆಂದರೆ ಈ ಅಂಗಡಿಯಲ್ಲಿರುವ ಎಲ್ಲಾ ಸಾಮಾನುಗಳು ಕೂಡ ಮಣ್ಣಿನಿಂದಲೇ ತಾಯಾರಾದವುಗಳು. ನಿನ್ನ ಒಂದು ರೂಪಾಯಿಗೆ ಮಣ್ಣನ್ನು ತೆಗೆದುಕೊಂಡು ಹೋಗಿ ನಿನಗೆ ಬೇಕಾದ್ದನ್ನು ಪಡೆದುಕೊ ಎಂದ. ಆಗ ಗ್ರಾಹಕನಿಗೆ ಮಣ್ಣಿನ ಮಹತ್ವ ಅರ್ಥವಾಯಿತು.
ಮಣ್ಣಿನಿಂದ ಹುಟ್ಟಿದ ನಾವೆಲ್ಲರೂ ಮಣ್ಣಿನ ಗೊಂಬೆಗಳೇ. ಆದರೆ ಮಣ್ಣಿನ ಗೊಂಬೆಗೆ ಜೀವತುಂಬುವುದೆಂದರೇನು? ಜಗತ್ತಿನಲ್ಲಿ ನೆಡೆದಾಡುವ ವ್ಯಕ್ತಿಗಳನ್ನು ನೋಡಿದರೆ ಎಲ್ಲರು ಮಣ್ಣಿನ ಗೊಂಬೆಗಳಂತೆ ಕಂಡುಬರುತ್ತಾರೆ. ಯಾರಲ್ಲಿಯೂ ಜೀವಂತಿಕೆಯಿಲ್ಲ, ಲವಲವಿಕೆ ಇಲ್ಲ. ಹೆಚ್ಚಿನವರಿಗೆ ಜೀವನದ ಉದ್ದೇಶವೇ ಗೊತ್ತಿರುವುದಿಲ್ಲ.. ಪ್ರತಿಯೊಬ್ಬರೂ ಹೊಟ್ಟೆಪಾಡಿಗಾಗಿ ಪಡಬಾರದ ಕಷ್ಟವನ್ನು ಪಡುತ್ತಾರೆ.ಜೀವನ ಹೂರಾಟದಲ್ಲಿ ಸ್ಪಂದನ ಶಕ್ತಿಯನ್ನು ಕಳೆದುಕೊಂಡಿದ್ದಾರೆ.ಇಂದಿನ ಮನುಷ್ಯ ಒಬ್ಬ ವ್ಯಕ್ತಿಯಾಗಿ ಬದುಕುತ್ತಾನೆಯೇ ಹೊರತು ಇತರರ ಬಗ್ಗೆ ಯೋಚಿಸುವುದಿಲ್ಲ. ಹೀಗೆ ಸಮಾಜದ ಸಮಸ್ಯೆಯ ಬಗ್ಗೆ, ದೇಶದ ಆಗುಹೋಗುಗಳ ಬಗ್ಗೆ ಮನುಷ್ಯ ನಿರ್ಲಿಪ್ತ ನಾಗುತ್ತಿದ್ದಾನೆ. ಸಮಾಜ, ದೇಶದ ತೊಂದರೆಯ ಬಗ್ಗೆ ಮಣ್ಣಿನ ಗೊಂಬೆಯಂತೆ ವರ್ತಿಸುತ್ತಿದ್ದಾನೆ.
ಒಂದು ದ್ಯೇಯ ಕ್ಕಾಗಿ, ಉದ್ದೇಶಕ್ಕಾಗಿ, ಬದುಕಿದರೆ ನಮ್ಮ ಬಾಳು ಸಾರ್ಥಕವಾಗುತ್ತದೆ. ನಮ್ಮ ಸಮಾಜ, ಪರಂಪರೆಯನ್ನು ತಿಳಿದುಕೊಂಡು ಆದರ ಉಳಿವು ಮತ್ತು ಬೆಳವಣಿಗೆಯಲ್ಲಿ ಕಂಕಣ ಬದ್ಧರಾಗುವುದೇ ನಮ್ಮಲ್ಲಿ ಜೀವ ತುಂಬಿಸುವ ಕೆಲಸ. ನಮ್ಮ ಸಂಸ್ಕೃತಿ, ಸಮಾಜದ ಬಗ್ಗೆ ಅಭಿಮಾನ ಉಂಟುಮಾಡುವ ಕೆಲಸ ಆಗಬೇಕಿದೆ.ಈ ಎಲ್ಲಾ ವಿಚಾರ, ಪೀಠಿಕೆ, ಹೊಸವರ್ಷದ ಆಚರಣೆಗೆ ಸಂಬಂಧ ವಾಗಿ. ಪ್ರತಿ ಹೊಸವರ್ಷದ ಲ್ಲಿ ನಮ್ಮ ಕ್ಯಾಲೆಂಡರ್ ಬದಲಾಗಿರುತ್ತದೆ.ಆದರೆ ಹೊಸ ವರ್ಷದ ಆಚರಣೆ ವರ್ಷದಿಂದ ವರ್ಷಕ್ಕೆ ಭಿನ್ನವಾಗಿರುತ್ತದೆ….. ಆದ್ರೆ ನಮ್ಮ ಅಲೋಚನೆಗಳು ಬದಲಾಗಿವೆಯ ಎಂಬುದೇ ಪ್ರಶ್ನೆ…..???
ಹೊಸ ವರ್ಷದ ಆಚರಣೆ ಎಂದ್ರೆ ಇತ್ತೀಚಿಗೆ ನಾವು ಒಂದು ಟ್ರೆಂಡ್ ಫಾಲೋ ಮಾಡ್ತಾ ಇದ್ದೀವಿ ಅನ್ಸುತ್ತೆ… ಅರ್ಥವಿಲ್ಲದ ಆಚರಣೆ ಮಾಡುವ ಬದಲು.. ಬದುಕು ಬದಲಿಸುವ ಅರ್ಥಪೂರ್ಣ ಆಚರಣೆ ಗಳು ಇಂದಿನ ದಿನಗಳಲ್ಲಿ ಅವಶ್ಯಕ ವಾಗಿ ಬೇಕಾಗಿವೆ. ಮನೋರಂಜನೆಜೊತೆಗೆ ಹೊಸ ವರ್ಷದ ದಿನ ಒಂದಷ್ಟು ಸಮಾಜ ಮುಖಿ ಕೆಲಸಗಳು ಆಗಬೇಕಾಗಿದೆ . ಹೊಸ ವರ್ಷದ ದಿನ ವೃದ್ದಾಶ್ರಮ ಕ್ಕೆ ಹೋಗಿ ವಯೋವೃ ದ್ದ ರನ್ನು ಭೇಟಿ ಮಾಡುವುದು… ಅವರಿಗೆ ಬೇಕಾದ ಪೂರಕ ಸಾಮಾಗ್ರಿ ಗಳನ್ನು ಒದಗಿಸುವುದು, ಒಂದು ಪ್ರೀತಿಯ ಅಪ್ಪುಗೆ , ಸಾಂತ್ವನದ ನಾಲ್ಕು ಮಾತುಗಳು ಹಿರಿಯ ಜೀವ ಗಳಿಗೆ ಭರವಸೆಯ ಬೆಳಕನ್ನು ಮೂಡಿಸುವುದಲ್ಲದೆ ಅವರಿಗೆ ನಮಗೂ ಎಲ್ಲರು ಇದ್ದಾರೆ ಎಂಬ ಭಾವನೆ ಮೂಡುತ್ತದೆ.
ಹಾಗೆ ರೋಡಂಚಿನಲ್ಲಿ ಚಿಂದಿ ಆಯುವ ಎಷ್ಟೋ ಮಕ್ಕಳಿಗೆ ಊಟ, ಬಟ್ಟೆಗು ಕಷ್ಟ ಪಟ್ಟಿರುತ್ತಾರೆ… ಅಂತಹವರಿಗೆ ನಾವು ದುಡಿದ ಒಂದಷ್ಟು ಭಾಗವನ್ನು ಅವರ ಬೇಕು ಬೇಡಗಳಿಗೆ ವಿನಿಯೋಗಿಸಿದರೆ…. ನಮ್ಮ ಬದುಕು ಸಾರ್ಥಕ ವಾಗುತ್ತದೆ.
ಏನು ಆಗಲಿಲ್ಲ ವೆಂದರೆ ನಾವು ಕಲಿತ ನಾಲ್ಕು ಅಕ್ಷರ ಗಳನ್ನು ಅನಕ್ಷರಸ್ತ ಮಕ್ಕಳಿಗೆ ಹೇಳಿಕೊಟ್ಟರೆ ಅದು ಒಂದು ರೀತಿ ಸೇವೆಯೇ. ಅಲ್ಲವೇ?? ಮನುಷ್ಯ, ಮನುಷ್ಯನಿಗೆ ಆಗದೇ ಇದ್ದರೆ ಆದೀತೆ ಅಲ್ಲವೇ?
ಸೇವಾ ಮನೋಭಾವನೆ ಇದ್ದರೆ ಯಾವ ರೂಪದಲ್ಲಿಯಾದರು ನಾವು ಇತರರಿಗೆ ಸಹಾಯ ಮಾಡಬಹುದು. ಇರುವುದೊಂದು ಬದುಕು ಅರ್ಥ ಪೂರ್ಣ ವಾಗಿ ಬದುಕೋಣ…. ವಿಶಾಲ ಮನೋಭಾವನೆಯನ್ನು ಹೊಂದೋಣ…. ಆಸೆ, ಮದ, ಮಾತ್ಸರ್ಯ ಗಳನ್ನು ತ್ಯಜಿಸೋಣ… ಪ್ರೀತಿ ಯ ಹಣತೆಯ ಹಚ್ಚೋಣ.
ಹೊಸ ವರ್ಷದ ಆಚರಣೆ ಬಗ್ಗೆ ಹೇಳುವ ವಿಚಾರ ಬಂದಾಗ ನನಗೆ ಅನ್ನಿಸಿದ್ದು ನಮ್ಮ ಹೊಸ ವರ್ಷದ ಆಚರಣೆ ಕೇವಲ ಮೋಜು.ಮಸ್ತಿಗಷ್ಟೇ ಸೀಮಿತವಾಗದೆ ಹೊಸ ಹೊಸ ಆಲೋಚನೆಗೆ ತೆರೆದುಕೊಳ್ಳ ಬೇಕಾಗಿದೆ.ಹೊಸ ವರುಷ ನೂರಾರು ಹೊಸಗನಸುಗಳಿಗೆ ಕನ್ನಡಿಯಾಗಬೇಕಿದೆ. ಹೊಸ ವರುಷ ಹೊಸ ಹುರುಪಿನ ಆದರ್ಶಗಳಿಗೆ, ದ್ಯೇಯ, ಉದ್ದೇಶ ಗಳಿಗೆ ದಾರಿದೀಪವಾಗ ಬೇಕಿದೆ.
2023 ನೇ ವಸಂತ ವನ್ನು ದಾಟಿ 2024 ನೇ ವಸಂತಕ್ಕೆ ಕಾಲಿಡುವ ಈ ಸುಸಂಧರ್ಭದಲ್ಲಿ ಭಗವಂತ ತಮ್ಮೆಲ್ಲರ ಬಾಳಲ್ಲಿ ಸುಖ, ಸಂತೋಷ ನೆಮ್ಮದಿಯನ್ನು ತರಲಿ ಎಂಬ ಹಾರೈಕೆಯೊಂದಿಗೆ…..
ಕೀರ್ತಿ ಕಿರಣಕುಮಾರ್
ಜಂಭ ರಡಿ
.