ಆಲೂರು: ಅನ್ನ, ಅಕ್ಷರ, ವಸತಿಗಳನ್ನು ಕೊಟ್ಟು ಸಾವಿರಾರು ಬಡಮಕ್ಕಳ ಬಾಳನ್ನು ಬೆಳಗಿದ ಲಿಂಗೈಕ್ಯ ಡಾ ಶ್ರೀ ಡಾ.ಶಿವಕುಮಾರ ಸ್ವಾಮಿಗಳವರ ಆದರ್ಶ ಸಾಧನೆಗಳು ನಾಡಿನ ಹಿರಿಮೆಯನ್ನು ಹೆಚ್ಚಿಸಿವೆ ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಆಲೂರು ತಾಲೂಕು ಲಿಂಗಾಯತ ಸಂಘದ ವತಿಯಿಂದ ಆಯೋಜಿಸಿದ್ದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 6ನೇ ವರ್ಷದ ಪುಣ್ಯಸ್ಮರಣೆ ಹಾಗೂ ದಾಸೋಹ ದಿನ ಆಚರಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು.ನಿಸ್ವಾರ್ಥ ಮತ್ತು ಕರುಣೆಯ ನೈಜ ಸಾಕಾರಮೂರ್ತಿಗಳಾಗಿದ್ದ ಶ್ರೀಗಳು ಸಮಾಜ ಸೇವೆಗೆ ಅಪ್ರತಿಮ ಕೊಡುಗೆಗಳನ್ನು ನೀಡಿದ್ದಾರೆ. ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಅವರ ಕೆಲಸವು ಲಕ್ಷಾಂತರ ಜನರ ಜೀವನವನ್ನು ತಲುಪಿದೆ ಮತ್ತು ಸಮರ್ಪಣೆ ಹಾಗೂ ಮಾನವೀಯ ಸೇವೆಗೆ ಅತ್ಯುನ್ನತ ಉದಾಹರಣೆಯಾಗಿದೆ ಎಂದರು.
ತಾಲೂಕು ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ರೇಣುಕಾ ಪ್ರಸಾದ್ ಮಾತನಾಡಿ, ಶಿವಕುಮಾರ ಸ್ವಾಮೀಜಿ ಅವರು ಈ ಶತಮಾನ ಕಂಡ ಅಪರೂಪದ ಶರಣರಾಗಿದ್ದವರು. ಶ್ರೀಗಳು ಅನ್ನ, ಅಕ್ಷರ ಮತ್ತು ಜ್ಞಾನ ದಾಸೋಹ ಮೂಲಕ ತ್ರಿವಿಧ ದಾಸೋಹವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಮಾಡಿದರು. ಯಾವುದೇ ಜಾತಿ, ಧರ್ಮ ಭೇದ ಮಾಡಿದೆ ಎಲ್ಲರೂ ಒಂದೇ ಎಂಬ ರೀತಿಯಲ್ಲಿ ಸಹಾಯ ಬೇಡಿ ಬಂದ ಲಕ್ಷಾಂತರ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ, ಆಹಾರ ನೀಡಿ ಸಮಾಜದಲ್ಲಿ ಒಂದು ಉತ್ತಮ ಸ್ಥಾನವನ್ನು ಹಾಗೂ ಹೆಸರು ಗಳಿಸುವಂತೆ ಮಾಡಿದವರು ಎಂದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಜಯಣ್ಣ ಮಾತನಾಡಿ, ನಡೆದಾಡುವ ದೇವರು ಎಂದೇ ಪ್ರಖ್ಯಾತರಾಗಿದ್ದ ಸಿದ್ದಗಂಗೆ ಶಿವಕುಮಾರ ಸ್ವಾಮೀಜಿಗಳು ಸಮಾಜ ಸೇವೆಗಳ ಮೂಲಕ ಅಪಾರ ಜನರ ಜೀವನ ಪರಿವರ್ತನೆಗೊಳಿಸಿದ್ದಾರೆ. ಹಲವು ಸಂಸ್ಥೆಗಳ ಮೂಲಕ ನಿಸ್ವಾರ್ಥ ಸೇವೆಯ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. ಅವರ ಕಾರ್ಯ ಮುಂದಿನ ಪೀಳಿಗೆಗಳಿಗೂ ಪ್ರೇರಣೆ ನೀಡಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅನ್ನದಾಸೋಹ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಕಲಾಪುರ ಮಠದ ಪೀಠಾಧ್ಯಕ್ಷರಾದ ಶ್ರೀ ಧರ್ಮರಾಜೇಂದ್ರ ಪ್ರಸಾದ್, ವೀರಶೈವ ಸಂಘದ ಕಾರ್ಯದರ್ಶಿ ಶಿವಮೂರ್ತಿ, ಖಜಾಂಚಿ ಟೀಕರಾಜು, ನಿರ್ದೇಶಕರಾದ ನಟರಾಜ್, ಸಂದೀಪ್, ಬಸವರಾಜ್, ಹೆಮಂತ್, ಕಾಂತರಾಜು, ಜಿಲ್ಲಾ ಹೆಚ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್, ಹುಣಸುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮಾನವನೂರು ಮೋಹನ್, ಬಿಜೆಪಿ ಮಂಡಲ ಅಧ್ಯಕ್ಷೆ ಉಮಾ ರವಿಪ್ರಕಾಶ್, ಮಾಜಿ ಅಧ್ಯಕ್ಷ ನಾಗರಾಜ್, ಹಿರಿಯ ಮುಖಂಡ ರಮೇಶ್ ಹಳೆ ಆಲೂರು, ಸಮಾಜದ ಮುಖಂಡರಾದ ಕಟ್ಟೆಗದ್ದೆ ನಾಗರಾಜ್, ಪ್ರಸನ್ನ, ದೀಪು, ಜಗದೀಶ್, ಸಂದೀಪ್, ಪ್ರವೀಣ್, ನವೀನ್ ಸೇರಿದಂತೆ ಮುಂತಾದವರು ಹಾಜರಿದ್ದರು.
previous post
next post