ಆಲೂರು:- ಗ್ರಾಮೀಣ ಭಾಗದ ಯುವಕನೋರ್ವ ತನ್ನ ತಾಯಿಯ ಹೆಸರಿನಲ್ಲಿ ಸಮಾಜ ಸೇವೆಗೆ ಮುಂದಾಗುತ್ತಿರುವುದು ಆದರ್ಶ ಸಮಾಜದ ನಿರ್ಮಾಣಕ್ಕೆ ಮಾದರಿಯಾಗಿದೆ, ಎಲ್ಲಾ ಯುವಕರು ಈ ರೀತಿಯ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಜಿ.ಪಂ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಆಲೂರು ತಾಲ್ಲೂಕಿನ ರಾಯರ ಕೊಪ್ಪಲು ಗ್ರಾಮದಲ್ಲಿರುವ ಇನ್ಸ್ ಪೈರ್ ಶಾಲೆಯ ಆವರಣದಲ್ಲಿ ಆದಿ ಚುಂಚನಗಿರಿ ಮಠ, ರಾಧಮ್ಮ ಜನಸ್ಪಂದನ , ಸರ್ಕಾರಿ ಜಿಲ್ಲಾಸ್ಪತ್ರೆ, ಸ್ಪರ್ಷ್ ಹಾಸ್ಪಿಟಲ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅರಕಲಗೂಡು ಮಾಜಿ ಶಾಸಕ ಎ ಟಿ ರಾಮಸ್ವಾಮಿ ಮಾತನಾಡಿ, ಹಣವಿರುವವರು ಶ್ರೀಮಂತರಲ್ಲ, ಆರೋಗ್ಯವಿರುವವರೇ ನಿಜವಾದ ಶ್ರೀಮಂತರು, ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಆರ್ಥಿಕ ತೊಂದರೆಯಿಂದಾಗಿ ಜನರು ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ನಕಲಿ ಔಷಧಿಗಳು ಮಾರುಕಟ್ಟೆಗೆ ಕಾಲಿಟ್ಟಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಗ್ರಾಮೀಣ ಭಾಗದ ಜನರು ತಮ್ಮ ಕೆಲಸ ಕಾರ್ಯಗಳ ಒತ್ತಡದಲ್ಲಿ ಆರೋಗ್ಯ ತಪಾಸಣೆ ಮಾಡಿಸಲು ಮುಂದಾಗಿರುವುದಿಲ್ಲ ಇಂತಹ ಶಿಬಿರಗಳನ್ನು ಹೆಚ್ಚು ಉಪಯುಕ್ತವಾಗಿವೆ ಎಂದರು.
ಡಾ. ರಾಜಶೇಖರ್ ಮಾತನಾಡಿ, ಯಾವುದೇ ಕಾಯಿಲೆ ಗುಣ ಲಕ್ಷಣಗಳನ್ನು ತಿಳಿಯಲು ಹಾಗೂ ಪ್ರಾಥಮಿಕ ರೋಗದ ಹಂತವನ್ನು ಕಂಡು ಹಿಡಿಯಲು ಇಂತಹ ಶಿಬಿರಗಳು ಮಹತ್ವವಾದವು ಗ್ರಾಮೀಣ ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಎಂದು ತಿಳಿಸಿದರು.
ಹಾಸನ ಜಿಲ್ಲಾ ಆರೋಗ್ಯಾಧಿಕಾರಿ ಶಿವಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಹಲವಾರು ಸಂಘ ಸಂಸ್ಥೆಗಳು, ಖಾಸಗಿ ಆಸ್ಪತ್ರೆಗಳು, ಉಚಿತ ಶಿಬಿರಗಳನ್ನು ಆಯೋಜಿಸುತ್ತಿರುವುದಕ್ಕೆ ನಮ್ಮ ಸಹಕಾರವಿದ್ದು, ಜನರ ಆರೋಗ್ಯ ರಕ್ಷಣೆಗೆ ನಮ್ಮ ಇಲಾಖೆ ಶ್ರಮಿಸುತ್ತಿದೆ ಎಂದು ತಿಳಿಸಿದರು.
ರಾಧಮ್ಮ ಜನಸ್ಪಂದನ ಸಂಸ್ಥಾಪಕ ಅಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ, ನಾನು ಸಮಾಜ ಸೇವೆ ಮಾಡಬೇಕು ಎಂದು ಚಿಕ್ಕ ವಯಸ್ಸಿನಲ್ಲಿಯೇ ತೀರ್ಮಾನಿಸಿದ್ದು,ಆದಿ ಚುಂಚನಗಿರಿ ಸ್ವಾಮೀಜಿ ನಿರ್ಮಲಾನಂದ ಸ್ವಾಮೀಜಿ, ಶಂಭುನಾಥ ಸ್ವಾಜೀಜಿಯವರ ಆಶೀರ್ವಾದ ಹಾಗೂ ಹಿರಿಯರ ಮಾರ್ಗದರ್ಶನ, ಆಸ್ಪತ್ರೆಗಳ ಸಹಕಾರದಿಂದ ಇಂತಹ ಹಲವಾರು ಸೇವೆಗಳನ್ನು ನೀಡಿದ್ದೇನೆ. ಇನ್ಸ ಪೈರ್ ಶಾಲೆಯ ಮುಖ್ಯಸ್ಥ ಅಶೋಕ್ ಸರ್ ಗೆ ಧನ್ಯವಾದ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎ. ಟಿ ರಾಮಸ್ವಾಮಿ, ಇನ್ಸ್ ಪೈರ್ ಶಾಲಾ ಮುಖ್ಯಸ್ಥ ಅಶೋಕ್, ಬಿ ಇ ಓ ಕೃಷ್ಣೇಗೌಡ, ನ್ಯೂರೋ ಸರ್ಜನ್ ಹರ್ಷ ಸುರೇಶ್, ಪಿ.ಡಿ.ಓ ಸಣ್ಣಪ್ಪ, ನಾಯಕರಹಳ್ಳಿ ಮಂಜೇಗೌಡ , ಶ್ರೀಕಾಂತ್, ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು.
