ಆಲೂರು: ಮಕ್ಕಳಿಗೆ ಜವಾಬ್ದಾರಿಯುತ ಮತ್ತು ಸಂಸ್ಕಾರಯುತ ಶಿಕ್ಷಣ ನೀಡುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರ ಮೇಲಿದೆ. ನಾವು ಮಕ್ಕಳಿಗೆ ನೀಡುವ ಶಿಕ್ಷಣ ಮತ್ತು ಸಂಸ್ಕಾರ ಅವರ ಮುಂದಿನ ಜೀವನ ರೂಪಿಸುವ ಮಾರ್ಗವಾಗುತ್ತದೆ ಎಂದು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ ಎಚ್.ಎಲ್ ಮಲ್ಲೇಶ ಗೌಡ ತಿಳಿಸಿದರು.
ತಾಲ್ಲೂಕಿನ ಹೊನ್ನೇನಹಳ್ಳಿ ಕೂಡಿಗೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಶ್ರಯದಲ್ಲಿ ಕಳೆದ ಸಾಲಿನ ಕನ್ನಡ ಮಾಧ್ಯಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ತೇರ್ಗಡೆಯಾಗಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ದತ್ತಿ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಶಾಲೆಯ ಒಳಗಡೆ ಕಲಿಯುವ ಶಿಕ್ಷಣದಷ್ಟೆ ಮಹತ್ವವನ್ನು ದೈಹಿಕ ಚಟುವಟಿಕೆಗಳಿಗೂ ನೀಡಿ, ಮಕ್ಕಳ ಆಸಕ್ತಿ ಹಾಗೂ ಪ್ರತಿಭೆಗೆ ತಕ್ಕಂತೆ ವೇದಿಕೆ ನೀಡಿದರೆ, ಸಮಾಜದ ಆಸಕ್ತಿಯಾಗಿ ಬೆಳೆಯುತ್ತಾರೆ ಎಂದ ಅವರು ಪ್ರಸ್ತುತ ದಿನಗಳಲ್ಲಿ ಪೋಷಕರು ಕೆಲಸದ ಒತ್ತಡಲ್ಲಿ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಶಾಲೆಗಳಿಗೆ ಭೇಟಿ ನೀಡುವಂತಹ ಹಾಗೂ ಶಿಕ್ಷಕರಗಳ ಜೊತೆ ಚರ್ಚಿಸುವಂತಹ ಪರಂಪರೆ ಮರೆಯಾಗುತ್ತಿರುವುದರಿಂದ ಶಿಕ್ಷಕರು ಹಾಗೂ ಪೋಷಕರ ಸಂಪರ್ಕ ಕಡಿತಗೊಂಡು ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಕುಂಠಿತಗೊಳ್ಳಲು ಕಾರಣವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಣ ಮೌಲ್ಯಧಾರಿತವಾಗಿ ದೊರೆಯುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ, ಉನ್ನತ ಮಟ್ಟದ ವಿದ್ಯಾಭ್ಯಾಸ ಮತ್ತು ಪದವಿಗೇರಲು ಸಾಧ್ಯವಾಗುತ್ತದೆ.ವಿದ್ಯಾರ್ಥಿಗಳು ಗುರು- ಹಿರಿಯರಿಗೆ ಮತ್ತು ಪೋಷಕರಿಗೆ ಗೌರವ ನೀಡಿದ್ದೆ ಆದಲ್ಲಿ, ಮುಂದೆ ಆ ವ್ಯಕ್ತಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತಾನೆ ಎಂದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ತೇರ್ಗಡೆಯಾದ ಸುಮಾರು 25ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಚ್.ಬಿ ಮದನಗೌಡ, ರಾಜ್ಯ ಸಣ್ಣ ಹಾಗೂ ಪ್ರಾದೇಶಿಕ ಪತ್ರಿಕೆಗಳ ಸಂಘದ ರಾಜ್ಯಾಧ್ಯಕ್ಷ ಜಿ.ಆರ್ ಕೆಂಚೇಗೌಡ, ಹಾಸನ ಡಯಟ್ ಉಪನ್ಯಾಸಕಿ ಪ್ರೇಮ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ, ಕಾರ್ಯದರ್ಶಿ ಚಿದಾನಂದ, ಶಾಲಾ ಮುಖ್ಯ ಶಿಕ್ಷಕಿ ಪೂರ್ಣಿಮಾ, ಸೇರಿದಂತೆ ಶಾಲಾ ಸಹ ಶಿಕ್ಷಕರು ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಪೋಟೋ ಕ್ಯಾಪ್ಶನ್: ತಾಲ್ಲೂಕಿನ ಹೊನ್ನೇನಹಳ್ಳಿ ಕೂಡಿಗೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಶ್ರಯದಲ್ಲಿ ಕಳೆದ ಸಾಲಿನ ಕನ್ನಡ ಮಾಧ್ಯಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ತೇರ್ಗಡೆಯಾಗಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದತ್ತಿ ಪುರಸ್ಕಾರವನ್ನು ನೀಡಿ ಸನ್ಮಾನಿಸಲಾಯಿತು.
previous post
next post