*ಆಲೂರು ತೃತೀಯ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಹ್ವಾನ*
ಆಲೂರು : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು, ಹಾಸನ ಜಿಲ್ಲೆ ಆಲೂರು ತಾಲ್ಲೂಕು ಘಟಕದ ವತಿಯಿಂದ ೨೦೨೫ ಜನವರಿ ೧೯, ಭಾನುವಾರ ಆಲೂರು ತಾಲ್ಲೂಕಿನ ಕೆ. ಹೊಸಕೋಟೆ ಹೋಬಳಿಯ ಹರಿಹಳ್ಳಿ ಕೆಂಚಾಂಬ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿರುವ ಆಲೂರು ತಾಲ್ಲೂಕು ತೃತೀಯ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಹಿರಿಯ ಪತ್ರಕರ್ತೆ, ಬರಹಗಾರ್ತಿ ಲೀಲಾವತಿಯವರನ್ನು ಅಧಿಕೃತವಾಗಿ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಹಿರಿಯ ಪತ್ರಕರ್ತ, ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ರವಿ ನಾಕಲಗೂಡು, ವೇದಿಕೆಯ ತಾಲ್ಲೂಕು ಅಧ್ಯಕ್ಷ ಕೃಷ್ಣೇಗೌಡ ಮಣಿಪುರ, ಗೌರವಾಧ್ಯಕ್ಷ ಎಂ. ಬಾಲಕೃಷ್ಣ, ಕ.ಸಾ.ಪ. ಮಾಜಿ ಅಧ್ಯಕ್ಷ ಎಸ್. ಎಸ್. ಶಿವಮೂರ್ತಿ, ಉಪಾಧ್ಯಕ್ಷ ಟಿ.ಕೆ.ನಾಗರಾಜ್, ಕಾರ್ಯದರ್ಶಿ ಧರ್ಮ ಕೆರಲೂರು, ಮಹಿಳಾ ಕಾರ್ಯದರ್ಶಿ ಎಂ. ಚಂದ್ರಕಲಾ ಆಲೂರು, ಹಾಸನ ತಾಲ್ಲೂಕು ಅಧ್ಯಕ್ಷೆ ಗೀತಾ ಕೆ.ಸಿ., ಸಮ್ಮೇಳನ ಉಸ್ತುವಾರಿ ಎಚ್.ಡಿ. ಸೋಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
*ಸಮ್ಮೇಳನಾಧ್ಯಕ್ಷರ ಪರಿಚಯ*
ಲೀಲಾವತಿಯವರು ೧೯೫೦ ನವೆಂಬರ್ ೨೩ ರಂದು ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಹರಿಹಳ್ಳಿಯಲ್ಲಿ ಜನಿಸಿದರು. ತಂದೆ ಎಚ್.ಎಸ್. ವೆಂಕಟನಾರಯಣಪ್ಪ, ತಾಯಿ ಗೌರಮ್ಮ.
ಎಂ. ಎ. ಸ್ನಾತಕೋತ್ತರ ಪದವೀಧರೆಯಾದ ಇವರು ೧೯೭೫ ರಿಂದ ೧೯೮೫ ರವರೆಗೆ ಜನಮಿತ್ರ ದಿನಪತ್ರಿಕೆಯಲ್ಲಿ ಉಪ ಸಂಪಾದಕಿಯಾಗಿ, ೧೯೮೬ ರಿಂ ೧೯೮೯ ರವರೆಗೆ ಜನತಾ ಮಾಧ್ಯಮದಲ್ಲಿ ಸುದ್ಧಿಗಾರರಾಗಿ ೧೯೮೮ ರಿಂದ ೧೯೮೯ ಕನ್ನಡ ಪ್ರಭ ಪತ್ರಿಕೆಯ ಜಿಲ್ಲಾ ಕರಸ್ಪಾಂಡೆAಟಾಗಿ, ೨೦೦೪ ರಲ್ಲಿ ಕನ್ನಡ ಪ್ರಭ ಬೆಂಗಳೂರು ಕಛೇರಿಯಲ್ಲಿ ಉಪ ಸಂಪಾದಕಿಯಾಗಿ, ೨೦೦೫ ರಿಂದ ಹಾಸನವಾಣಿ ಸ್ವಂತ ದಿನಪತ್ರಿಕೆಯನ್ನು ಜವಬ್ಧಾರಿಯನ್ನು ಹೊತ್ತಿದ್ದಾರೆ.
ಪತ್ರಿಕೋಧ್ಯಮ ಕ್ಷೇತ್ರದಲ್ಲಿ ನಿರಂತರವಾಗಿ ೫೦ ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿರುವ ಇವರು ಭಾರತೀಯ ಭಾಷಾ ಪತ್ರಿಕೆ ಸಂಪಾದಕರ ಸಂಘ ನವದೆಹಲಿ ಇದರ ರಾಜ್ಯ ಸಂಘದ ಪ್ರತಿನಿಧಿಯಾಗಿದ್ದಾರೆ. ೨೦೧೧ ರಿಂದ ೨೦೧೪ ಅವಧಿಯಲ್ಲಿ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಎರಡು ವರ್ಷ ರಾಜ್ಯ ಪತ್ರಿಕಾ ಮಾನ್ಯತಾ ಸಮಿತಿ ಸದಸ್ಯೆಯಾಗಿ ಕೆಲಸ ಮಾಡಿದ್ದಾರೆ. ಎರಡು ವರ್ಷಗಳ ಕಾಲ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ ಕಾರ್ಯ ನಿರ್ವಹಿಸಿದ್ದಾರೆ.
“ಹಾಸನ ಎಡಿಟೋರಿಯಲ್ ಭಾಗ ೦೧” , “ಸುವರ್ಣ ಕನ್ನಡ ರಾಜ್ಯೋತ್ಸವ ರಸ ಪ್ರಶ್ನೆ ಸ್ಪರ್ಧೆ” ಸೇರಿದಂತೆ ಇವರ ಹಲವಾರು ಸಮಾಜಮುಖಿ ಲೇಖನಗಳು ಹಾಸನವಾಣಿಯಲ್ಲದೇ ಜನತಾ ಮಾಧ್ಯಮ, ಉದಯವಾಣಿ, ಹಾಸನ ಮಾಧ್ಯಮ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹಲವಾರು ಕಾರ್ಯಕ್ರಮಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.
ದೂರದರ್ಶನ ಚಂದನ, ಕಸ್ತೂರಿ ಟಿವಿ, ಡಿಡಿ ೦೧, ಅಮೋಘ್ ವಾಹಿನಿ, ಎಚ್.ಸಿ.ಎನ್. ವಾಹಿನಿ , ಟಿವಿ ೦೫, ಹಾಸನ ಸಿಟಿ ಟಿವಿ, ಹಾಸನ ಆಕಾಶವಾಣಿ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಇವರ ಸಂದರ್ಶನಗಳು ಪ್ರಸಾರವಾಗಿವೆ.
ಇವರ ಸಾಹಿತ್ಯಿಕ, ಸಾಮಾಜಿಕ ಹಾಗೂ ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಯಶೋಧಮ್ಮ ಜಿ. ನಾರಾಯಣ ಪತ್ರಿಕಾ ಪ್ರಶಸ್ತಿ, ಕುವೆಂಪು ಕಾವ್ಯ ಪ್ರಶಸ್ತಿ, ಶ್ರವಣ ಬೆಳಗೊಳ ಮಠದ ನಿಸ್ವಾರ್ಥ ಸೇವಾ ಪ್ರಶಸ್ತಿ, ಪ್ರಾಮಾಣಿಕ ಗ್ರಾಹಕ ಪ್ರಶಸ್ತಿ, ವಿಶ್ವ ಚೇತನ ರಾಷ್ಟ್ರೀಯ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಪತ್ರಿಕಾ ಅಕಾಡೆಮಿ ಪ್ರಶಸ್ತಿ, ವಿಶಿಷ್ಠ ಲೇಖಕಿ ಪ್ರಶಸ್ತಿ ಸೇರಿದಂತೆ ಹಲವು ಮಹತ್ತರ ಪ್ರಶಸ್ತಿಗಳು ಸಂದಿವೆ.
previous post
next post