*ನಮ್ಮೂರ ಶಾಲೆ ನಮ್ಮೂರ ಹೆಮ್ಮೆಯ ಶಿಕ್ಷಕಿ*
(ಹಿರಿಯ ಪ್ರಾಥಮಿಕ ಪಾಠಶಾಲೆ ಯಡೇಹಳ್ಳಿ)
*ಸದ್ದು ಗದ್ದಲವಿಲ್ಲದ ಸದು ವಿನಯದ ಶಿಕ್ಷಕಿ ಶ್ರೀಮತಿ ವಾಣಿ*
ಶ್ರೀಮತಿ ವಾಣಿ ರವರು ಶಿಕ್ಷಣ ಕ್ಷೇತ್ರದಲ್ಲಿ ಶಿಸ್ತಿನ ಸಿಪಾಯಿಯಂತೆ ಪವಿತ್ರ ಕ್ಷೇತ್ರವಾದ ಶಿಕ್ಷಕ ವೃತ್ತಿಯನ್ನು ಪವಿತ್ರ ಸೇವೆ ಎಂದು ಶ್ರದ್ಧಾ ಭಕ್ತಿಯಿಂದ ಮಕ್ಕಳ ಹಾಗೂ ಶಾಲೆ ಏಳಿಗೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.
ಹೊಳೆನರಸೀಪುರದ ಶ್ರೀ ಹೆಚ್ ಎಂ ಕುಮಾರ್ ಮತ್ತು ಶ್ರೀಮತಿ ಪಿ ಎಸ್ ಸುಲೋಚನಾ ದಂಪತಿಗಳ ಪುತ್ರಿಯಾಗಿ ಜನನ. ಪ್ರಾಥಮಿಕ ಶಿಕ್ಷಣ , ಪ್ರೌಢ ಶಿಕ್ಷಣ ಆಲೂರ ತಾಲ್ಲೂಕಿನಲ್ಲಿ ಪೂರ್ಣಗೊಳಿಸಿ, ಪದವಿ ಪೂರ್ವ ಶಿಕ್ಷಣ ಬೆಂಗಳೂರಿನಲ್ಲಿ ಪಡೆದರು, ಡಿ.ಎಡ್., ದೊಡ್ಡಕಾಡನೂರುನಲ್ಲಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಮೈಸೂರಿನಲ್ಲಿ ಪೂರ್ಣಗೊಳಿಸಿ 2008ರಲ್ಲಿ ಶಿಕ್ಷಕಿಯಾಗಿ ನೇಮಕಗೊಂಡರು, ರಾಜ್ಯದ ವಿವಿಧ ಸ್ಥಳಗಳಲ್ಲಿ ಶಿಕ್ಷಕ ವೃತ್ತಿ ನಡೆಸಿ, ಸಕಲೇಶಪುರ ತಾಲೂಕಿನ ಮಳಲಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ನಂತರ 2016 ರಿಂದ ನಮ್ಮ ಯಡೇಹಳ್ಳಿ ಗ್ರಾಮದ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸದಾ ನಗುಮುಖದಿಂದ ಗ್ರಾಮಸ್ಥರು, ಮಕ್ಕಳೊಂದಿಗೆ ನಡೆದುಕೊಂಡು, ಮನಸ್ಸಿದ್ದಲ್ಲಿ ಮಾರ್ಗವಿದೆ ಎಂಬ ಸಿದ್ಧಾಂತಕ್ಕೆ ಬದ್ಧರಾಗಿ ಯಾವುದೇ ಕಾಯವನ್ನು ಯಶಸ್ವಿಯಾಗಿ ನಿಭಾಯಿಸುತ್ತಾ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಸರಿದೂಗಿಸಿಕೊಂಡು ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡುವುದು ಸವಾಲಿನ ಕೆಲಸವಾಗಿದೆ. ಇವತ್ತಿನ ಗ್ರಾಮಗಳಲ್ಲಿ ಸರ್ಕಾರಿ ಶಾಲೆಗಳಿಗೆ ಬಡ ಮಕ್ಕಳೇ ಹೆಚ್ಚಿನ ಸಂಖ್ಯೆ ವಿದ್ಯೆ ಪಡೆಯುವುದು, ಆ ಮಕ್ಕಳ ಮೇಲೆ ವಿಶೇಷ ಒಲವು ತೋರಿ, ಅವರ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸರ್ವವಿಧದಲ್ಲೂ ಶ್ರಮಿಸುವ ಗುರುವಾಗಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ, ಗಾಂಧಿಜಯಂತಿ, ಅಂಬೇಡ್ಕರ್ ದಿನಾಚರಣೆ, ಗಣರಾಜ್ಯೋತ್ಸವ ಹಬ್ಬಗಳನ್ನು ವಿಶೇಷ ರೀತಿಯಲ್ಲಿ ಆಚರಿಸಿ ಸತ್ಯ, ಧರ್ಮ, ಶಾಂತಿ, ಪ್ರೇಮ, ಅಹಿಂಸೆ, ದೇಶಭಕ್ತಿ ಮುಂತಾದ ಆದರ್ಶ ಗುಣಗಳನ್ನು ರೂಡಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಪಾಠ ಪ್ರವಚನಗಳಲ್ಲಿ ನವೀನತನವನ್ನು ಅಳವಡಿಸಿಕೊಂಡು ಶಿಕ್ಷಣ ನೀಡುವುದು ಇವರ ವಿಶೇಷ ಗುಣ, ಶ್ರೀಯುತರ ಸೌಮ್ಯ ನಡೆ, ಸಮಯ ಪಾಲನೆ ವಿಶೇಷವಾಗಿ ನನಗೆ ಆದರ್ಶವೆನಿಸುತ್ತದೆ.
ಕಳೆದ ಎಂಟು ವರ್ಷಗಳಿಂದ ಒಂದೇ ಒಂದು ದಿನ ಕೂಡ ಇವರ ಬಗ್ಗೆ ಯಾವುದೇ ಒಂದು ಸಣ್ಣ ದೂರು ಬರೆದಿರುವುದು ಇವರ ಕಾಯಕ ಶ್ರದ್ದೆಗೆ ಹಿಡಿದ ಕೈಗನ್ನಡಿಯಾಗಿದೆ.
ಕೆ ಎಸ್ ಸುರೇಶರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ಹೃದಯ ಎಂಬ ಮಗಳು, ಶುಬಾನ್ ಎಂಬ ಪುತ್ರನನ್ನು ಪಡೆದಿದ್ದಾರೆ.
ಇವರ ಶಿಸ್ತಿನ ಸೇವೆಯನ್ನು ಪರಿಗಣಿಸಿ ಶಿಕ್ಷಣ ಇಲಾಖೆಯಿಂದ ಪುರಸ್ಕಾರಗಳು ದೊರೆಯಲಿ, ಇಂತಹ ಶ್ರೇಷ್ಠ ಗುರುಗಳಿಗೆ ದೀರ್ಘ ಆಯಸ್ಸು ಆರೋಗ್ಯ ಎಲ್ಲವನ್ನು ಪಡೆದು ಬಹುಕಾಲ ಬಾಳಲೆಂದು ಭಗವಂತನನ್ನು ಪ್ರಾರ್ಥಿಸುತ್ತೇನೆ.
ಯಡೇಹಳ್ಳಿ ಆರ್ ಮಂಜುನಾಥ್
previous post
next post