ವರದಿ ಸತೀಶ್ ಚಿಕ್ಕಕಣಗಾಲು
ಆಲೂರು: ಓಬವ್ವನವರ ಶೌರ್ಯ, ಮಾತೃಭೂಮಿಯ ಮೇಲಿನ ಭಕ್ತಿ ಅನನ್ಯವಾದದ್ದು ಎಂದು ತಹಸೀಲ್ದಾರ್ ಸಿ.ಪಿ ನಂದಕುಮಾರ್ ಹೇಳಿದರು.
ಪಟ್ಟಣದ ಆಟೋ ನಿಲ್ದಾಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ವೀರ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 18ನೇ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮುದ್ದಹನುಮಪ್ಪನ ಅನುಪಸ್ಥಿತಿಯಲ್ಲಿ ಕೋಟೆಯ ನುಸುಳುಮಾರ್ಗದ ಕಾವಲಿನಲ್ಲಿ ಒನಕೆಯೊಂದಿಗೆ ಓಬವ್ವ ತಾನೇ ನಿಂತು, ಹೈದರಾಲಿಯ ಸೇನಾನಿಗಳನ್ನು ಸದೆಬಡಿದ ವೀರವನಿತೆ, ಇತಿಹಾಸದ ಪುಟಗಳಲ್ಲಿ ಅಚ್ಚಾಗಿರುವ ಒನಕೆ ಓಬವ್ವರ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಮರೆಯಲಾಗದ ಹೆಸರಾಗಿದೆ ಎಂದು ತಿಳಿಸಿದರು.
ಪ್ರಧಾನ ಭಾಷಣ ಮಾಡಿದ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಮಲ್ಲೇಶ್ ಮಾತನಾಡಿ, ಪೌರಾಣಿಕ, ಐತಿಹಾಸಿಕ ಹಿನ್ನೆಲೆಯುಳ್ಳ ಚಿತ್ರದುರ್ಗದ ವೀರ ವನಿತೆ ಒನಕೆ ಓಬವ್ವ ಅವರು ಸಮಯೋಚಿತ ಯುಕ್ತಿ, ಧೈರ್ಯ ಮತ್ತು ಸ್ಥೈರ್ಯದ ಮೂಲಕ ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರ ಜನ್ಮದಿನವನ್ನು ‘ಒನಕೆ ಓಬವ್ವ ಜಯಂತಿ’ ಎಂದು ಆಚರಿಸಲು ಸರ್ಕಾರ ನಿರ್ಧರಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಮತ್ತು ಸಂತಸದ ಸಂಗತಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಛಲವಾದಿ ಸಮುದಾಯದವರು ಹಾಗೂ ತಾಲೂಕಿನ ಪ್ರಥಮ ಎಂ.ಎ ಪದವಿ ಪಡೆದ ಕಾಟಿಹಳ್ಳಿಯ ಕೆ.ಆರ್ ತಿಮ್ಮಯ್ಯ, ಪ್ರಥಮ ಬಿ.ಎಡ್ ಪದವಿ ಪಡೆದ ಕರಡಿ ಬೆಟ್ಟದ ಕೆ.ಕೆ ರುದ್ರಯ್ಯ, 105 ವಯಸ್ಸಿನ ಮಾದನಹಳ್ಳಿ ಗ್ರಾಮದ ನಿವಾಸಿ ರುದ್ರಮ್ಮ, ತೊರಳ್ಳಿಯ ರಾಷ್ಟ್ರಮಟ್ಟದ ಕ್ರೀಡಾಪಟು ಪ್ರೀತಮ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷೆ ತಾಹೇರ ಬೇಗಂ, ಸದಸ್ಯ ತೌಫಿಕ್ ಅಹಮದ್,
ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಎ.ಟಿ ಮಲ್ಲೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಮಂಜೇಗೌಡ, ಬಿಜೆಪಿ ಅಧ್ಯಕ್ಷೆ ಉಮಾ ರವಿಪ್ರಕಾಶ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತಿ ಕೃಷ್ಣ, ತಾಲೂಕು ಅಧ್ಯಕ್ಷ ಎಸ್.ಎಸ್ ಶಿವಮೂರ್ತಿ, ಪಾಳ್ಯ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎಲ್ ಲಿಂಗರಾಜು, ದಲಿತ ಸಂಚಾಲಕ ಬಸವರಾಜು, ಮುಖಂಡರಾದ ದೇವರಾಜು, ಅಜ್ಜೇನಳ್ಳಿ ಲೋಕೇಶ್, ಸೇರಿದಂತೆ ಮುಂತಾದವರು ಹಾಜರಿದ್ದರು.
ಪೋಟೋ ಕ್ಯಾಪ್ಶನ್: ಪಟ್ಟಣದ ಆಟೋ ನಿಲ್ದಾಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ವೀರ ಒನಕೆ ಓಬವ್ವ ಜಯಂತಿ ಕಾರ್ಯಕ್ರಮಲ್ಲಿ ಛಲವಾದಿ ಸಮುದಾಯದ ಕೆ.ಆರ್ ತಿಮ್ಮಯ್ಯ, ಕೆ.ಕೆ ರುದ್ರಯ್ಯ, ರುದ್ರಮ್ಮ, ಪ್ರೀತಮ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
previous post
next post