*ನಿಧಾನವಾಗಿ ಸಮಾಧಾನವಾಗಿ ಓದಿ..*
ಇದು ನೀವು ನಾವುಗಳು ಅನುಭವಿಸಿದ್ದು
*ಗೌರಿ-ಗಣೇಶ ಹಬ್ಬ.ನೆನಪಿನ ಅಂಗಳದಲ್ಲಿ ಹಾಗೆ ಹತ್ತಾರು ಮೆಟ್ಟಿಲು ಕೆಳಗಿಳಿದು.*
(ನನ್ನ 35ವರ್ಷಗಳ ಹಿಂದೆ ಅಂದರೆ 1985 ಅಚೆಗೆ ಈಚೆಗೆ ನೆನಪುಗಳು)…
ಬಾಲ್ಯದ ಘಟನಾವಳಿಯ ಕೋಣೆಯೊಳಗೆ ಹೊಕ್ಕು,ಅಲ್ಲಿ ನಮ್ಮೂರ ಜನರು ಪ್ರತಿವರ್ಷವು ಅಪರಿಮಿತ ಉತ್ಸಾಹ, ಅನನ್ಯ ಬಕ್ತಿ, ಶ್ರದ್ದೆಗಳಿಂದ ಆಚರಿಸುತ್ತಿದ್ದ ಗೌರಿ-ಗಣೇಶ ಹಬ್ಬದ ಆಚರಣೆಯ ದ್ರುಶ್ಯಾವಳಿಯ ಎಳೆಯನ್ನು ಹಾಗೆಯೇ ಬಿಚ್ಚುತ್ತಾಹೋದರೆ,ಹಿರಿಮೆಯುಳ್ಳ ಚಿತ್ರಣಗಳ ಸರಮಾಲೆ ನನ್ನ ಕಣ್ಮುಂದೆ ಬರುತ್ತದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಬಳಿಯಿರುವ ಯಡೇಹಳ್ಳಿ ನಮ್ಮೂರು. ಅಂದಿನ ದಿನಗಳಲ್ಲಿ ನಮ್ಮೂರ ಜನರು ಗಣೇಶ ಚತುರ‍್ತಿಯ ಆಗಮನಕ್ಕೂ ಮುನ್ನಾ ಒಂದು ಸಮಿತಿ ರಚಿಸಿ, ಸಮಿತಿಯ ಮೂಲಕ ಆಚರಣೆಯ ನಿಮಿತ್ತವಾಗಿ ತಕ್ಕ ಕಾರ‍್ಯ-ಯೋಜನೆಗಳನ್ನು ಕೈಗೆತ್ತಿಕೊಂಡು, ಅದರಂತೆ ಸಮಿತಿಯ ಕೆಲ ಸದಸ್ಯರುಗಳು ಮಂಟಪ, ಚಪ್ಪರ ಕಟ್ಟುವುದರಲ್ಲಿ, ಕೆಲವರು ನಾಟಕ, ಸಾಂಸ್ಕ್ರುತಿಕ ಅಬ್ಯಾಸದಲ್ಲಿ, ಮತ್ತೆ ಕೆಲವರು ಇನ್ನುಳಿದ ಕೆಲಸಗಳ ಜವಾಬ್ದಾರಿಯನ್ನು ವಹಿಸಿಕೊಂಡು ಮುತುವರ‍್ಜಿಯಿಂದ ಮಾಡಿಬಿಡುತ್ತಿದ್ದರು.
ಗಣೇಶ ಹಬ್ಬಕ್ಕೆ ಒಂದೆರಡು ತಿಂಗಳುಗಳ ಮುಂಚಿತವಾಗಿಯೇ ನಮ್ಮೂರ ಶಾಲಾವರಣದಲ್ಲಿ ಪ್ರತಿದಿನ ಸಂಜೆಯಿಂದ ರಾತ್ರಿಯವರೆಗೂ ನಾಟಕ, ಸಾಂಸ್ಕ್ರುತಿಕ ಕಾರ‍್ಯಕ್ರಮಗಳ ಅಬ್ಯಾಸ ಜರಗುತ್ತಾ ಇರುತ್ತಿತ್ತು. ಅಲ್ಲಿ ಸಹಜವಾಗಿ ನಾನು ಮತ್ತು ನನ್ನ ಸಂಗಡಿಗರು ಹೋಗುತ್ತಿದ್ದೆವು, ನಾಟಕದ ಮಾಸ್ತರರು ಹಾರ‍್ಮೊನಿಯಂ ನುಡಿಸುವುದು, ಅಬ್ಯಾಸಿಗರಿಗೆ ಹಾಡನ್ನು ಹೇಳಿಕೊಡುವುದು, – ಒಟ್ಟಾರೆ ಎಲ್ಲವೂ ಒಂದು ರೀತಿಯ ಹಾಸ್ಯ, ವಿನೋದ, ಮನೋರಂಜನೆಯನ್ನು ನಮಗೆ ತಂದುಕೊಡುತ್ತಿತ್ತು.
ಚಿಕ್ಕವರಾದ್ದರಿಂದ ಆಚರಣೆಗೆ ಸಂಬಂದಿಸಿದ ಯಾವುದೇ ಜವಾಬ್ದಾರಿಯಿಲ್ಲದೆ ಮುಕ್ತರಾಗಿ ಇರುತ್ತಿದ್ದ ನಾನು ಮತ್ತು ನನ್ನ ಸಂಗಡಿಗರೆಲ್ಲ ಮಂಟಪ-ಚಪ್ಪರ ಕಟ್ಟುವುದನ್ನು, ನಾಟಕ ಅಬ್ಯಾಸ ಮಾಡುವುದನ್ನು ಮತ್ತು ಮಾಡುವವರನ್ನು ನೆಟ್ಟ ಮನಸ್ಸಿನಿಂದ ನೋಡುತ್ತಾ ನಿಲ್ಲುವುದೇ ನಮ್ಮ ಕಾಯಕವಾಗಿ ಬಿಟ್ಟಿತ್ತು. ಕೆಲವೊಮ್ಮೆ ನಿಯೋಜಿತ ಸದಸ್ಯರುಗಳು ಕೊಡುತ್ತಿದ್ದ ಚಿಕ್ಕಪುಟ್ಟ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಲು ಸಾದ್ಯವಾದಸ್ಟು ಪ್ರಯತ್ನಿಸಿ, ಕೊನೆಯಲ್ಲಿ ಅವರು ಸಂದಾಯ ಮಾಡುತ್ತಿದ್ದ ಹೊಗಳಿಕೆ, ತೆಗಳಿಕೆ ಎಲ್ಲವನ್ನು ಯಾವುದೇ ಪ್ರತ್ಯುತ್ತರ ನೀಡದೆ ಸ್ವೀಕರಿಸುತ್ತಿದ್ದೆವು. ಏಕೆಂದರೆ ಮನದೊಳಗೆ ಪಸರಿಸಿದ ಹಬ್ಬದ ವಾತಾವರಣ ತಂದುಕೊಡುತ್ತಿದ್ದ ಸಂಬ್ರಮ-ಸಡಗರದ ಮುಂದೆ ಇನ್ಯಾವ ವಿಚಾರವೂ ನಮ್ಮ ಪರಿಗಣನೆಗೆ ಎಳ್ಳಶ್ಟು ಬರುತ್ತಿರಲಿಲ್ಲ! ಪ್ರತಿವರ್ಷವೂ ಮಂಟಪ ಹಾಗೂ ಚಪ್ಪರವನ್ನು ಬಿನ್ನ-ವಿಬಿನ್ನ ರೀತಿಯಲ್ಲಿ ಸಿದ್ದಪಡಿಸುತ್ತಿದ್ದ ನಿಯೋಜಿತ ಸದಸ್ಯರು ಮತ್ತು ಅವರಲ್ಲಿ ಒಬ್ಬೊಬ್ಬರಲ್ಲೂ ಇದ್ದ ಒಂದೊಂದು ವಿಶಿಶ್ಟತೆ, ಚಾಣಕ್ಶತೆ ಮತ್ತು ಕೈಚಳಕ ಇವೆಲ್ಲವೂ ಸಮಪ್ರಮಾಣದಲ್ಲಿ ಕೂಡಿ ಒಂದು ಸುಂದರ ಮಂಟಪವಾಗಿ ಗಣೇಶನ ಪೀಠರೋಹಣಕ್ಕೆ ಕಾಯುತ್ತಾ ಇರುತ್ತಿತ್ತು. ಆದರೆ ಒಂದು ಸ್ವಲ್ಪವೂ ಹೇಳದೇ-ಕೇಳದೆ ಬರುತ್ತಿದ್ದ ಮಳೆ, ಎರಡು-ಮೂರು ದಿನಗಳಾದರೂ ಬಾರದೆ ಇರುತ್ತಿದ್ದ ವಿದ್ಯುತ್ -ಇವೆರಡು ಆ ಸಮಯದಲ್ಲಿ ನಮಗೆ ದೊಡ್ಡ ಶತ್ರುಗಳಂತೆ ತೋರುತಿದ್ದವು.
ಗಣೇಶಮೂರ್ತಿಯ ಮಂಟಪದಲ್ಲಿ ಕೂರಿಸುವ ದಿನದಿಂದ ಆರಂಬಿಸಿ ಗಣೇಶ ಮೂರ್ತಿಯನ್ನು ಬಿಡುವ ದಿನದವರೆಗೂ, ಅಂದರೆ ಸುಮಾರು ಹತ್ತು ಹದಿನೈದು ದಿನಗಳ ಕಾಲ ಮಿತಿಯಿಲ್ಲದ ಪುಳಕ,ನಿತ್ಯ ನವನವೀನ ಉತ್ಸಾಹ ನಮ್ಮ ಪಾಲಿಗೆ ಜಮವಾಗುತ್ತಿತ್ತು .ಊರಲ್ಲಿ ದೊಡ್ಡ ಗಣೇಶನನ್ನು ಕೂರಿಸುವುದರ ಜೊತೆಗೆ ನಾನು, ನನ್ನ ಸಹಪಾಟಿಗಳು ಸೇರಿದಂತೆ ಬಹುತೇಕ ಹುಡುಗರು ತಮ್ಮ ತಮ್ಮ ಮನೆಗಳಲ್ಲಿ ಚಿಕ್ಕದಾದ ಮಂಟಪವನ್ನು ಕಟ್ಟಿ, ಚಿಕ್ಕ ಗಣೇಶಮೂರ‍್ತಿಯನ್ನು ಕೂರಿಸುತ್ತಿದ್ದೆವು.ಎಲ್ಲಿ ಗಣೇಶನಿರುವನೋ ಅಲ್ಲಿ ತಾಯಿ ಗೌರಮ್ಮ ಇರಲೇ ಬೇಕಲ್ಲವೇ? ಹಾಗಾಗಿ ದೊಡ್ಡ ಗಾತ್ರದ ಗಣೇಶಮೂರ‍್ತಿಯ ಪಕ್ಕದಲ್ಲಿ ಅಂಗೈ ಉದ್ದದ ಗೌರಮ್ಮನ ಮೂರ‍್ತಿಯುನ್ನು ಸಹ ಕೂರಿಸುತ್ತಿದ್ದರು.
ಶಾಲೆಗೆ ಹೋಗುವ ವೇಳೆಯವರೆಗೂ ದೊಡ್ಡ ಗಣಪತಿಯ ಪೆಂಡಾಲ್ ನಲ್ಲೇ ಕಾಲ ಕಳೆಯುತ್ತಿದೆವು. ಸಂಜೆ ಶಾಲೆಯನ್ನು ಮುಗಿಸಿಕೊಂಡು ಬಂದ ನಂತರವೂ ಓಡೋಡಿ ಹೋಗಿ ಪೆಂಡಾಲನ್ನು ಸೇರಿ ಅಲ್ಲಿ ಆಟವಾಡುತ್ತಿದ್ದೆವು, ಕುಣಿಯುತ್ತಿದೆವು, ಪೂಜೆಯ ವೇಳೆಯಲ್ಲಿ ಕೈಮುಗಿದು ನಿಲ್ಲುತ್ತಿದ್ದೆವು ಮತ್ತು ಸಂಜೆ ಮಹಮಂಗಳಾರತಿಯ ನಂತರ ಕೊಡುವ ಪಲಾಹಾರಕ್ಕೆ ಮುಗಿಬೀಳುತ್ತಿದ್ದೆವು. ಇಷ್ಟೇ ಅಲ್ಲದೇ ಬೆಳಗ್ಗೆ ಹಾಗೂ ಸಂಜೆ ಊರಿನ ಎಲ್ಲ ಮನೆಗಳಿಗೆ ಕೇಳುಸುವಂತೆ ದ್ವನಿವರ್ಧಕದಿಂದ ಮೂಡಿಬರುತ್ತಿದ್ದ ಭಕ್ತಿಗೀತೆಗಳನ್ನೂ ದಿನಾ ಆಲಿಸುತ್ತಾ ಇದ್ದೆವು. ಕಾಲಕ್ರಮೇಣ ಕೆಲವು ಭಕ್ತಿಗೀತೆಗಳು ನಮಗೆ ಕಂಟಪಾಟವಾದವು. ದಿನಂಪ್ರತಿ ಏನಾದರೂ ಒಂದು ಮನೋರಂಜನೀಯ ಕಾರ‍್ಯಕ್ರಮವಿರುತ್ತಿತ್ತು. ಚಿಕ್ಕ-ಪುಟ್ಟ ನಾಟಕ, ಭಕ್ತಿ ಪ್ರದಾನ ಚಲನಚಿತ್ರಗಳನ್ನು ಹಾಕುವುದು, 25ನೇ ವರ್ಷದ ಗಣೇಶೋತ್ಸವ ಪ್ರಯುಕ್ತ ನಮ್ಮೂರಿನಲ್ಲಿ 60 ದಿನಗಳ ಕಾಲ ಗಣೇಶ ಮೂರ್ತಿಯನ್ನು ಕೂರಿಸಿ ಎರಡು ದಿನಕ್ಕೊಂದು ಕಾರ್ಯಕ್ರಮಗಳು ಚೌಡಿಕೆ ಮೇಳ… ರಸಮಂಜರಿ ಕಾರ್ಯಕ್ರಮ ನಮ್ಮೂರ ಕಲಾವಿದರು ಹಾಡಿದ್ದನ್ನು ನೋಡಿದ್ದೇನೆ,ಹರಿಕಥೆ, ಭರತನಾಟ್ಯ ನೃತ್ಯ ,ಊರಿನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಉತ್ತರ ಕರ್ನಾಟಕದ ಕಡೆಯ ಹಾಸ್ಯ ನಾಟಕಗಳ ಪ್ರದರ್ಶನ,ವಿಶೇಷವೆಂದರೆ ಒಂದು ಭಾರಿ ವಸ್ತು ಪ್ರದರ್ಶನ ಕೂಡ ಎರಡು ಶಾಲಾ ಕೊಠಡಿಗಳಲ್ಲಿ ಊರಿನ ಹಿರಿಯರಾಗಿದ್ದ ಬ್ರಾಹ್ಮಣ ಕುಟುಂಬದ ರಾಮಯ್ಯನವರು ನೂರಾರು ಬಗೆಯ ಕೈಯಾರೆ ಮಾಡಿದ ಕಸ ಕರಕುಶಲಗಳನ್ನು. ಊರಿನ ಜನರಿಗೆ ಮತ್ತು ಹೊರ ಊರಿನಿಂದ ಬರುವ ಜನರಿಗೆ ನೋಡಲು ಅವಕಾಶ ಮಾಡಿಕೊಟ್ಟಿರುತ್ತಿದ್ದರು. ಹೀಗೆ ಇತ್ಯಾದಿ ಕಾರ‍್ಯಕ್ರಮಗಳು ಇರುತ್ತಿದ್ದವು.
ಹೀಗೆ ವಿಜ್ರುಂಬಣೆಯಿಂದ ನಡೆಯುತ್ತಿತ್ತು ಹಬ್ಬದ ಆಚರಣೆ ನಮ್ಮ ಊರಿನಲ್ಲಿ ಎಂದು ಹೇಳಲು ಖುಶಿಯಾಗುತ್ತದೆ. ಆ ಸಡಗರ ಈಗ ನೆನೆಸಿಕಂಡರೂ ಮನಸ್ಸಿಗೆ ಮುದನೀಡುತ್ತದೆ. ಈಗಲೂ ಸಹ ಊರಿನ ಯುವಕರು ಐದು ದಿನಗಳು ಗಣೇಶ ಪ್ರತಿಷ್ಠಾಪನೆ ಮಾಡಿ ಒಂದೆರಡು ಕಾರ್ಯಕ್ರಮಗಳನ್ನು ನಡೆಸಿ ವಿಜೃಂಭಣೆಯಿಂದ ವೀರಗಾಸೆ ನೃತ್ಯ ಇನ್ನಿತರ ವಾದ್ಯಗೋಷ್ಠಿಗಳೊಂದಿಗೆ ವಿಸರ್ಜನೆ ಮಾಡುವುದು ನಡೆಯುತ್ತಾ ಬಂದಿದೆ ಹಬ್ಬದ ಈ ಸಂಬ್ರಮ-ಸಡಗರ ನಾಡಿನಲ್ಲಿ ಯಾವಾಗಲೂ ಹೀಗೆ ಇರಲಿ.
ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಸಿಹಿಯಾದ ಶುಭಾಶಯಗಳು.
ಯಡೇಹಳ್ಳಿ”ಆರ್”ಮಂಜುನಾಥ್.
next post