ವರದಿ : ಸತೀಶ್ ಚಿಕ್ಕಕಣಗಾಲು
ಆಲೂರು: ಧರ್ಮದ ಪರಿಪಾಲನೆಯಿಂದ ಮಾತ್ರ ನಾಡಿನಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯ ಎಂದು ಯಸಳೂರು ತೆಂಕಲಗೂಡು ಬೃಹನ್ಮಠ ಪೀಠಾಧ್ಯಕ್ಷ
ಶ್ರೀ ಚನ್ನಸಿದೇಶ್ವರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಆಲೂರು ತಾಲೂಕಿನ ಪಾಳ್ಯ ಹೋಬಳಿ ಕಾರ್ಜುವಳ್ಳಿ ಗ್ರಾಮದಲ್ಲಿರುವ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ ಶ್ರೀ
ಸಂಸ್ಥಾನ ಹಿರೇಮಠದಲ್ಲಿ ಲಿಂ. ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಸ್ವಾಮಿಗಳವರ 46 ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ಶ್ರೀ ಷ. ಬ್ರ. ಸದಾಶಿವ ಶಿವಾಚಾರ್ಯ ಸ್ವಾಮಿಗಳವರ ಪಟ್ಟಾಧಿಕಾರದ ನಾಲ್ಕನೇ ವಾರ್ಷಿಕೋತ್ಸವ-ಜನ್ಮ ವರ್ಧಂತಿ ಮಹೋತ್ಸವ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿ ಕಲ್ಯಾಣ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಧರ್ಮ-ಸದ್ಭಾವನಾ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಆಧುನಿಕ ಯುಗದಲ್ಲಿ ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರದಿಂದ ಮಕ್ಕಳು ಹೊರ ಬರುತ್ತಿದ್ದಾರೆ. ಗುರು ಹಿರಿಯರ ಬಗ್ಗೆ ಗೌರವ ಕಡಿಮೆಯಾಗುತ್ತಿದೆ. ಆಧುನಿಕ ಯುಗದಲ್ಲಿ ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರಕ್ಕೆ ಧಕ್ಕೆಯಾಗದಂತೆ ಸಂಸ್ಕಾರಯುತರಾಗಿ ನಡೆದುಕೊಳ್ಳಬೇಕಿದೆ. ಪೋಷಕರಾದವರು ಮಕ್ಕಳಿಗೆ ತಿಳಿ ಹೇಳಬೇಕಾದ ಅಗತ್ಯತೆ ಇದೆ ಇದರಿಂದ ಸಮಾಜ ಸುಭದ್ರ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಇಂದಿನ ಆಧುನಿಕ ಜಗತ್ತಿನಲ್ಲಿ ಬದುಕುತ್ತಿರುವ ಸಮಾಜ ಪ್ರಾಚೀನ ಪರಂಪರೆಯನ್ನು ಮರೆತು ಸಾಗುತ್ತಿರುವದು ಮುಂದಿನ ಪೀಳಿಗೆಗೆ ಮಾರಕವೆನಿಸಿದೆ . ನಮ್ಮ ಸಂಸ್ಕೃತಿ ಸಾಹಿತ್ಯವನ್ನು ಭವಿಷ್ಯದ ಜನಾಂಗಕ್ಕೆ ಉಳಿಸಿಕೊಂಡು ಹೋಗಲು ಇಂತಹ ಧಾರ್ಮಿಕ ಕಾರ್ಯಕ್ರಮಗಳು ಅವಶ್ಯವೆನಿಸಿದ್ದು ಧರ್ಮ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಂಡರೆ ಮನಸ್ಸಿಗೆ ಶಾಂತಿ ನೆಮ್ಮದಿ ಲಭಿಸಲು ಸಾಧ್ಯ.
ನಾಡಿನ ವಿರಶೈವ ಪಂಚ ಪೀಠಗಳಲ್ಲಿ ಒಂದಾಗಿರುವ ರಂಭಾಪುರಿ ಪೀಠವು ಧರ್ಮದಿಂದ ವಿಶ್ವಕ್ಕೆ ಶಾಂತಿ ಎಂಬ ಸಂದೇಶದಡಿ ಕಾರ್ಯನಿರ್ವಹಿಸುತ್ತಿದ್ದು ಸಂಕೀರ್ಣಮಯವಾದ ಜಗತ್ತಿನಲ್ಲಿ ಅವರವರ ಭಾವ ಅವರವರ ಜಾತಿ ಧರ್ಮಗಳಿಗೆ ಒಳ್ಳೆಯದಾಗುವದರ ಜೊತೆಗೆ ಇಡಿ ಮನುಕುಲಕ್ಕೆ ಒಳ್ಳೆಯದಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಧರ್ಮರಾಜ್ ಹೊಂಕರವಳ್ಳಿ ಮಾತನಾಡಿ, ಕೃಷಿ ಎನ್ನುವುದು ಲಾಭವೂ ಹೌದು, ನಷ್ಟವೂ ಹೌದು. ವ್ಯವಸ್ಥಿತವಾದ ರೀತಿಯಲ್ಲಿ ಕೃಷಿ ಮಾಡಿದರೆ ಖಂಡಿತವಾಗಿ ಭೂಮಿ ನಮ್ಮ ಕೈ ಹಿಡಿಯುತ್ತದೆ,
ಬೆಳೆಗಳಿಗೆ ಅಗತ್ಯ ಪೋಷಕಾಂಶ ಒದಗಿಸುವುದು ಮಹತ್ವದ ಕೆಲಸ. ಯಾವ ಯಾವ ಬೆಳೆಗೆ ಎಷ್ಟು ಗೊಬ್ಬರವನ್ನು ಹಾಕಬೇಕು ಎನ್ನುವುದು ತಿಳಿದಿದ್ದರೆ ಒಳ್ಳೆಯದು. ಅನಗತ್ಯವಾಗಿ ಗೊಬ್ಬರವನ್ನು ಸುರಿಯುವುದರಿಂದ ಹೆಚ್ಚಿನ ಲಾಭವೇನು ಆಗುವುದಿಲ್ಲ. ಹೆಚ್ಚಿನ ಇಳುವರಿಗೆ ರಾಸಾಯನಿಕ ಗೊಬ್ಬರ ಬಳಸಬೇಕೆಂಬುದು ಬಹುತೇಕ ರೈತರಿಗೆ ತಿಳಿದಿರುವ ವಿಷಯ. ರಾಸಾಯನಿಕ ಗೊಬ್ಬರಗಳಿಂದ ಬೆಳೆಗಳಿಗೆ ಕೂಡಲೇ ಪೋಷಕಾಂಶಗಳು ದೊರೆಯುತ್ತವೆ. ವ್ಯವಸ್ಥಿತವಾಗಿ ಸಾವಯವ ಗೊಬ್ಬರ ಬಳಸುವುದರಿಂದಲೂ ಹೆಚ್ಚಿನ ಇಳುವರಿ ಪಡೆಯಬಹುದು. ಆದರೆ ಯಾವುದೇ ಗೊಬ್ಬರ ಬಳಸುವುದಕ್ಕಿಂತ ಮುಂಚೆ ಎಷ್ಟು ಹಾಕಬೇಕು ಎಂಬುದನ್ನು ಮಣ್ಣಿನ ಪರೀಕ್ಷೆ ಮಾಡಿಸಿ ತಿಳಿಯುವುದು ಒಳ್ಳೆಯದು. ರಾಸಾಯನಿಕ ಗೊಬ್ಬರ ಬಳಸುವವರಂತೂ ಮಣ್ಣು ಪರೀಕ್ಷೆ ಮಾಡಿಸಲೇಬೇಕು.
ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ ಶ್ರೀ ಸಂಸ್ಥಾನ ಹಿರೇಮಠದ ಪೀಠಾಧ್ಯಕ್ಷ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು, ಭಕ್ತರಿಗೆ ಸೇವಾ ಸಮರ್ಪಣಾ ಮನೋಭಾವ ಇದ್ದಾಗ ಮಾತ್ರ ಮಠಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ, ಶ್ರೀ ಕಾರ್ಜುವಳ್ಳಿ ಹಿರೇಮಠಕ್ಕೆ ಸಹಕಾರ ನೀಡುತ್ತಿರುವ ಭಕ್ತರು ಮಠದ ಆಧಾರ ಸ್ಥಂಭವಾಗಿರುವುದರಿಂದಲೇ ಮಠದಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸಲು ಸಾಧ್ಯವಾಗುತ್ತದೆ, ಸಂಸ್ಥಾನ ಶ್ರೀಮಠಕ್ಕೆ ತನ್ನದೇ ಇತಿಹಾಸವಿದೆ. ಧಾರ್ಮಿಕ ಭಕ್ತಿ ಬೆಳೆಸುವ ನಿಟ್ಟಿನಲ್ಲಿ ಶ್ರೀ ಮಠದ ಶ್ರಮಿಸುತ್ತಿದೆ ಎಂದರು. ಎಲ್ಲರೂ ಜೀವನದಲ್ಲಿ ದಾನ, ಧರ್ಮ, ಸನ್ಮಾರ್ಗ, ಸದ್ವಿಚಾರ ಅಳವಡಿಸಿಕೊಳ್ಳಬೇಕು ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀಮಠದ ಆವರಣದಲ್ಲಿ ಸೋಮವಾರ ಬೆಳಗ್ಗೆಯಿಂದ ಶ್ರೀ ಜಗದ್ಗುರು ಪಂಚಾಚಾರ್ಯ ಧ್ವಜಾರೋಹಣ, ಗಂಗಾಪೂಜೆ, ಕಂಕಣಧಾರಣೆ, ಮಹಾಸಂಕಲ್ಪ, ಪುಣ್ಯಾಹ ಸ್ವಸ್ತಿವಾಚನ ನವಗ್ರಹಯುಕ್ತ ಪ್ರಮುಖ ಕಲಶಾರಾಧನೆಗಳು, ಶ್ರೀ ವೀರಭದ್ರಸ್ವಾಮಿ ಮೂಲಮಂತ್ರ ಹೋಮ, ಪೂರ್ಣಾಹುತಿ, ರಕ್ಷಾಧಾರಣೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಸನ್ನಿಧಿಯಲ್ಲಿ ಮಹಾರುದ್ರಾಭಿಷೇಕ, ಪುಷ್ಪಾರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ. ಶ್ರೀ ವನದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ದುರ್ಗಾಸೂಕ್ತ ಪಾರಾಯಣ ಪೂರ್ವಕ ಕ್ಷೀರಾಭಿಷೇಕ, ಪುಷ್ಪಾರ್ಚನೆ, ಕುಂಕುಮಾರ್ಚನೆ, ಮಹಾನೈವೇದ್ಯ, ಶ್ರೀ ಇಷ್ಟನಾಗ, ಸಿದ್ದಿನಾಗ, ಮುತ್ತಿನಾಗ ದೇವರ ಸನ್ನಿಧಿಯಲ್ಲಿ ಪವಮಾನಯುಕ್ತ ಪಂಚಾಮೃತಾಭಿಷೇಕ, ಪುಷ್ಪಾರ್ಚನೆ ಮಹಾನೈವೇದ್ಯ, ಮಹಾಮಂಗಳಾರತಿ, ಶಿವಸಹಸ್ರನಾಮ ಸ್ತೋತ್ರ ಪಾರಾಯಣ ನಡೆದೆವು.
ಸಾಯಂಕಾಲದ ಶುಭಲಗ್ನದಲ್ಲಿ ಮಾಂಗಲ್ಯಧಾರಣೆ.
ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿ ಕಲ್ಯಾಣ ಮಹೋತ್ಸವವು ಶಿವಶಂಕರ ಶಾಸ್ತ್ರಿಗಳು, ಸಂಸ್ಥಾಪಕರು ಗಾನಸುಧಾ ಭಜನಾ ಮಂಡಳಿ, ಬೆಂಗಳೂರು ಮತ್ತು ಶ್ರೀ ಕೆ. ಎಸ್. ವೀರಪ್ಪ ದೇವರು, ಕಂಬಾಳು ಹಾಗೂ ಬಳಗ ಇವರ ಪೌರೋಹಿತ್ಯದಲ್ಲಿ ನಡೆದೆವು.
ಸಂಜೆ 5 ಗಂಟೆಗೆ ನಡೆದ ಧರ್ಮ-ಸದ್ಭಾವನಾ ಸಮಾರಂಭದಲ್ಲಿ ಎಂ. ವಿ. ತಾಂಡೇಶ್, ಸತೀಶ್ ಚಿಕ್ಕಕಣಗಾಲ್ ಕಾರ್ಜುವಳ್ಳಿ ಹಿರೇಮಠದ ವಾರ್ತಾ ಸಂಯೋಜಕ, ಬಿ.ಎನ್ ನವೀನ್ ಕುಮಾರ್ ಭೈರಾಪುರ ಮಠದ ವಾರ್ತಾ ಸಲಹೆಗಾರ ಹಾಗೂ ಕೆ. ಎಂ ನಿಂಗರಾಜ್ ವೀರಶೈವ ಮುಖಂಡ ಕೆರೆಹಳ್ಳಿ ಇವರು ಶ್ರೀ ಮಠದಿಂದ ನೀಡುವ ಗೌರವ ಗುರುರಕ್ಷೆಯನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಬೇಲೂರಿನ ವನ್ಯ ಗೋಪಿನಾಥ್ ಮತ್ತು ಕು. ದುಂಬಿ ಗೋಪಿನಾಥ್ ಅವರಿಂದ ಭರತನಾಟ್ಯ ಜರುಗಿತು.
ಕಾರ್ಯಕ್ರಮದಲ್ಲಿ ಹಾರನಹಳ್ಳಿ ರಾಮಲಿಂಗೇಶ್ವರ ಮಠದ ಶ್ರೀ ಶಿವಾಚಾರ್ಯ ಸ್ವಾಮಿಗಳು, ವೀರಶೈವ ಸಂಘದ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ, ಸಹಕಾರ್ಯದರ್ಶಿ ಡಾ ಜಯರಾಜ್, ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಮಹೇಶ್ ಚಿಕ್ಕೋಟೆ, ವೀರಶೈವ ಮುಖಂಡ ಲಿಂಗರಾಜು ಕೆರೆಹಳ್ಳಿ, ಪುರೋಹಿತರಾದ ದರ್ಶನ್ ಡಿ.ಆರಾಧ್ಯ ಹಾಸನ, ಯತೀಶ್ ಶಾಸ್ತ್ರಿಗಳು ಆಲೂರು, ಕೆ.ಪಿ. ಮಲ್ಲೇಶ್ ಕಾರ್ಜುವಳ್ಳಿ, ಶಿಕ್ಷಕ ಈ. ಸಿ. ಚಂದ್ರು, ವಕೀಲೆ ಮೋನಿಷಾ ಮುರುಚೂರು ಸೇರಿದಂತೆ ಮುಂತಾದವರು ಹಾಜರಿದ್ದರು.
previous post
next post