*ಈದ್ ಮಿಲಾದ್ ಸಹಬಾಳ್ವೆಯ ಪವಿತ್ರ ಉತ್ಸವವಾಗಬೇಕೆ ಹೊರತು ಬರೀ ಆಚರಣೆಯಾಗಬಾರದು* .
ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮದಿನ ಇಂದು. ಪ್ರತಿವರ್ಷ ಈ ದಿನದಂದು
ಮುಸ್ಲಿಮರು ಸಂಭ್ರಮದಿಂದ ಈದ್- ಮಿಲಾದ್ ಆಚರಿಸುತ್ತಾರೆ.
ಅದು 6ನೇ ಶತಮಾನ. ಆಗ, ಜನ್ಮ ತಳೆದ ಹೆಣ್ಣು ಮಕ್ಕಳನ್ನು ಜೀವಂತವಾಗಿ ಹೂಳಲಾಗುತ್ತಿತ್ತು. ಎಲ್ಲ ರಂಗಗಳಲ್ಲಿ ಅಧರ್ಮ, ಅನ್ಯಾಯ ಎಲ್ಲೆ ಮೀರಿತ್ತು. ಪ್ರಬಲರ ಮುಂದೆ ದುರ್ಬಲ ವರ್ಗದ ಜನರು ಜೀವನ ನಡೆಸಲು ಹೆಣಗಾಡುತ್ತಿದ್ದರು. ಮಹಿಳೆಯರ ಮೇಲಿನ ತಾರತಮ್ಯವೂ ಹೆಚ್ಚಿತ್ತು. ಇಂಥದ್ದೊಂದು ಕಾಲಘಟ್ಟದಲ್ಲಿ ನೊಂದವರು, ಶೋಷಿತರ ಪರವಾಗಿ ಗಟ್ಟಿಯಾಗಿ ದನಿ ಎತ್ತಿ ಹೋರಾಡಿದ ಪ್ರವಾದಿ ಮುಹಮ್ಮದ್ ಪೈಗಂಬರ್, ಹತ್ತಾರು ಕ್ರಾಂತಿಕಾರಿ ಬದಲಾವಣೆಗಳನ್ನೇ ತಂದು ಶೋಷಣೆಮುಕ್ತ ಸಮಾಜ ನಿರ್ಮಿಸಿದರು. ಹೆಜ್ಜೆ-ಹೆಜ್ಜೆಗೂ ಕಷ್ಟ ಎದುರಿಸುತ್ತ, ಕಣ್ಣೀರಲ್ಲೇ ಕೈತೊಳೆಯುತ್ತಿದ್ದ ಮಹಿಳೆಯರು ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗುವ ಮತ್ತು ಸ್ವಾಭಿಮಾನದಿಂದ ಬದುಕುವ ವಾತಾವರಣ ನಿರ್ಮಿಸಿದರು. ಧಾರ್ಮಿಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅವರ ವ್ಯಕ್ತಿತ್ವ, ಜೀವನ, ಸಂದೇಶ ಇಡೀ ಮಾನವ ಕುಲಕ್ಕೆ ಆದರ್ಶಪ್ರಾಯದಂತಿತ್ತು.
ಮಹಮ್ಮದ ಪೈಗಂಬರ್ ರವರ ಒಂದೊಂದು ನುಡಿಮುತ್ತುಗಳು ಬದುಕಿನ ದಾರಿದೀಪಗಳಂತಿವೆ. ‘ಶ್ರೀಮಂತಿಕೆ ಎಂಬುದು ಸಂಪತ್ತಿನ ಆಧಿಕ್ಯದ ಹೆಸರಲ್ಲ, ಮನಸ್ಸಿನ ಶ್ರೀಮಂತಿಕೆಯೇ ನಿಜವಾದ ಶ್ರೀಮಂತಿಕೆ’. ‘ಕಾರ್ಮಿಕನ ಬೆವರು ಆರುವುದಕ್ಕೆ ಮುಂಚೆ ಅವನಿಗೆ ಅವನ ವೇತನವನ್ನು ಕೊಟ್ಟುಬಿಡಿರಿ’. ‘ಹಿರಿಯರನ್ನು ಗೌರವಿಸದವನು, ಕಿರಿಯರ ಮೇಲೆ ವಾತ್ಸಲ್ಯ ತೋರದವನು, ಒಳಿತಿನ ಪ್ರಚಾರ ಮಾಡದವನು ಮತ್ತು ಕೆಡುಕಿನಿಂದ ಜನರನ್ನು ತಡೆಯದವನು ನಮ್ಮವನಲ್ಲ’….. ಇವು ಕೆಲವು ಉದಾಹರಣಗಳಷ್ಟೆ.
ನಿಮ್ಮ ಜೀವನದ ಎಲ್ಲಾ ಕಷ್ಟಗಳು ದೂರವಾಗಿ, ನಿಮ್ಮ ಕನಸುಗಳನ್ನು ದೇವರು ಈಡೇರಿಸಲಿ ಎಂದು ಈದ್ ಇ ಮಿಲಾದ್ ಈ ಪವಿತ್ರ ಸಂದರ್ಭದಲ್ಲಿ ನಾನು ಪ್ರಾರ್ಥಿಸುತ್ತೇನೆ.
ಯಡೇಹಳ್ಳಿ’ಆರ್’ಮಂಜುನಾಥ್.
ಕೆಪಿಸಿಸಿ ಸದಸ್ಯರು ಸಕಲೇಶಪುರ.